ಮೂಡಿಗೆರೆ 31
ಪಟ್ಟಣದ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನದಲ್ಲಿ ಕಳೆದ ಎರಡು ದಿನಗಳಿಂದ ವೈಕುಂಠ ಏಕಾದಶಿ ಹಾಗೂ ಶ್ರೀನಿವಾಸ ತಿರು ಕಲ್ಯಾಣೋತ್ಸವವನ್ನು ಭಕ್ತಿಭಾವದಿಂದ ವಿಜೃಂಭಣೆಯಿಂದ ಆಚರಿಸಲಾಯಿತು. ಮಂಗಳವಾರ ಬೆಳಗ್ಗೆ ಶ್ರೀ ಕೃಷ್ಣನಿಗೆ ಶಂಖಧಾರ, ಚಕ್ರಧಾರ ಸಹಸ್ರಸಹಿತ ವಿಶೇಷ ಪೂಜೆ ನೆರವೇರಿತು. ಮುಂಜಾನೆ ಸುಮಾರು 5 ಗಂಟೆಗೆ ವೈಕುಂಠ ದ್ವಾರ ಪ್ರವೇಶ ಕಾರ್ಯಕ್ರಮ ಭಕ್ತರ ಸಾನ್ನಿಧ್ಯದಲ್ಲಿ ನಡೆಯಿತು.
ಸಂಜೆಯ ವೇಳೆ ಶ್ರೀ ವೇಣುಗೋಪಾಲ ಸ್ವಾಮಿ, ಶ್ರೀ ಆಂಜನೇಯ ಸ್ವಾಮಿ, ಶ್ರೀ ಮಹಾಲಕ್ಷ್ಮಿ ದೇವಿ ಹಾಗೂ ಮಹಾ ಗಣಪತಿಗೆ ಶ್ರೀ ರಂಗ ಪೂಜೆ ನೆರವೇರಿಸಲಾಯಿತು. ಬುಧವಾರ ಬೆಳಗ್ಗೆ ಅನುಜ್ಞೆ ಗಣಪತಿ, ವಿಶ್ವಾಕ್ಷಣ ಪೂಜೆ, ಭಗತ್ ವಾಸುದೇವ ಪುಣ್ಯಾಹ ವಾಚನ ನಡೆಯಿತು.
ನಂತರ ಶ್ರೀ ಸ್ವಾಮಿ ಹಾಗೂ ಅಮ್ಮನವರಿಗೆ ಕಾಶಿ ಯಾತ್ರೆ, ವರ ಪರೀಕ್ಷೆ, ನಿಶ್ಚಿತಾರ್ಥ, ಸಾಕ್ಷಿ ತಾಂಬೂಲ, ಮಾಲಿಕ ಸಮರ್ಪಣೆ, ಪಾದಪ್ರಕ್ಷಾಲನೆ, ಮಂಗಳಾಷ್ಟಕ, ಕನ್ಯಾದಾನ ಮತ್ತು ಮಾಂಗಲ್ಯ ಧಾರಣೆಯೊಂದಿಗೆ ಲಕ್ಷ್ಮೀ ವೆಂಕಟೇಶ್ವರ ತಿರು ಕಲ್ಯಾಣೋತ್ಸವವನ್ನು ಸಂಭ್ರಮದಿಂದ ನೆರವೇರಿಸಲಾಯಿತು.
ಎರಡು ದಿನಗಳ ಕಾಲ ನಡೆದ ಈ ಧಾರ್ಮಿಕ ಕಾರ್ಯಕ್ರಮಗಳಲ್ಲಿ ತಾಲ್ಲೂಕಿನ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು. ದೇವಸ್ಥಾನ ಆವರಣದಲ್ಲಿ ಭಕ್ತಿಭಾವ ಹಾಗೂ ಆಧ್ಯಾತ್ಮಿಕ ವಾತಾವರಣ ಮೆರೆಯಿತು.


